ಪ್ರೀತಿ ಎಂದರೇನು ಎಂದು ಈಗ ಅರಿತೆನು…
ಭಾವನೆಗಳು ನಮ್ಮ ವೀಕ್ನೆಸ್ಸು ಅನ್ನೋದೆಲ್ಲಾ ಬರೀ ಬಾಯ್ಮಾತು. ಪ್ರೀತಿ, ದ್ವೇಷ, ಹೊಟ್ಟೆಕಿಚ್ಚು… ಭಾವನೆ ಯಾವುದೇ ಇರಲಿ ಅವೇ ನಮ್ಮನ್ನು ಮನುಷ್ಯರನ್ನಾಗಿಸುತ್ತವೆ. ಒಗ್ಗೂಡಿಸುತ್ತವೆ ಅಥವಾ ಕೆಲವೊಮ್ಮೆ ಬೇರ್ಪಡಿಸುತ್ತವೆ ಕೂಡ. ಈ ಭಾವನೆಗಳ ವಿಷಯಕ್ಕೆ ಬಂದಾಗ ನಾವ್ಯಾರು ಒಬ್ಬರಂತೆ ಮತ್ತೊಬ್ಬರಲ್ಲ. ಕೆಲವರು ತೀರಾ ಭಾವಜೀವಿಗಳಾದರೆ, ಇನ್ನೂ ಕೆಲವರು ಯಾವ ಭಾವನೆಯನ್ನೂ ತೋರ್ಪಡಿಸದ ನಿರ್ಲಿಪ್ತರು! ಹಾಗೆಂದು ಅವರಿಗೆ ಭಾವನೆಗಳೇ ಇಲ್ಲ ಎಂದಲ್ಲ. ಇನ್ನು ಕೆಲವರು ಕರುಣಾಮಯಿಗಳಾದರೆ, ಕೆಲವರು ಕಲ್ಲು ಹೃದಯದವರು. ಶಾಂತಿಯೇ ಮೂರ್ತಿವೆತ್ತಂತಿರುವವರು ಕೆಲವರಾದರೆ, ಮತ್ತೊಂದಷ್ಟು ಜನ ರೌದ್ರಾವತಾರಿಗಳು! ಇನ್ನೂ ಹಲವರು ವೈರುಧ್ಯಗಳ ಸಂಗಮ! ಈ ಭಾವನೆಗಳೇ ಹಾಗೆ… ಮನುಷ್ಯ ಜೀವಿ ತುಂಬಾ ಇಷ್ಟಪಡುವ, ಆದರೆ ಅಷ್ಟೇ ಅರ್ಥವಾಗದ ಸುಂದರ ಭಾವನೆಯೆಂದರೆ ಅದು ʼಪ್ರೀತಿʼ. ಸಿಟ್ಟಿನಂತೆ ಪ್ರೀತಿ ಅರೆ ಕ್ಷಣ ಬಂದು ಹೋಗಬಹುದು. ಮಾಯಾಜಿಂಕೆಯಂತೆ ಕೈಗೆಟುಕದೇ ಇರಬಹುದು. ಈ ಪ್ರೀತಿ ಎಷ್ಟು ಸುಂದರ ಭಾವನೆಯೋ ಕೆಲವೊಮ್ಮೆ ಅಷ್ಟೇ ದುಃಖವನ್ನೂ ತರಬಹುದು. ಸಿಟ್ಟನ್ನು ಗೆಲ್ಲುವವರು ಹೇಗೆ ಅಪರೂಪವೋ ಹಾಗೇ ಪ್ರೀತಿಯಲ್ಲಿ ಗೆಲ್ಲುವವರೂ ಕಡಿಮೆಯೇ. ಹೆತ್ತವರು, ಕುಟುಂಬ ಸದಸ್ಯರ ನಡುವಿನ ಪ್ರೀತಿ ಸಹಜ, ಆದರೆ ಯಾರೋ ಅಪರಿಚಿತರನ್ನು ಕಂಡಾಗ ಹುಟ್ಟುವ ಪ್ರೀತಿ ಒಂದು ವಿಸ್ಮಯ. ಅದು ಕ್ಷಣಿಕ ಆಕರ್ಷಣೆಯಲ್ಲದ, ಮನಸ್ಸಲ್ಲಿ ಬಿರುಗಾಳಿಯೆಬ್ಬಿಸಿ ಶಾಂತತೆಗೆ ಹಿಂದಿರುಗುವ ಅನುಭ...